ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
``ಪಾದ ಪ್ರತೀಕ್ಷ `` ಹೊಸ ಪ್ರತೀಕ್ಷೆಗಳೊಂದಿಗೆ

ಲೇಖಕರು :
ರಾಜ್ ಕುಮಾರ್
ಸೋಮವಾರ, ಏಪ್ರಿಲ್ 6 , 2015

ಮಧುರತರಾಂಬುಜವದನೇ | ಮದಗಜಸನ್ನಿಭಗಮನೇ |
ಪದುಮದಳಾಯತನಯನೇ | ಪರಮಪತಿವ್ರತೆ ಶಬರೀ ||
ಸೀತೆಯ ಕಾಣದರಿಂದ | ಅರಸುತ ಬಂದೆ ಕಬಂಧ |
ರೀತಿಯ ಪೇಳಲು ನಮಗೆ | ಬಂದೆವು ನಾವ್ ನಿನ್ನೆಡೆಗೆ||




ಇದು ಶಬರೀ ಮೋಕ್ಷ ಪ್ರಸಂಗದ ಪದ. ಶಬರಿಯಲ್ಲಿ ರಾಮ ಕಂಡುಕೊಂಡ ಬಗೆಯನ್ನು ಕವಿ ವರ್ಣಿಸುವುದು ಬಹಳ ವಿಶಿಷ್ಟ ವಾಗಿದೆ. ಅಧ್ಯಾತ್ಮಿಕವಾಗಿಯೂ ಲೌಕಿಕವಾಗಿಯೂ ಅವರವರ ಚಿಂತನೆಯ ದೃಷ್ಟಿಕೋನವನ್ನೂ, ಅದರ ಆಳವನ್ನೂ ಪರಿಕಿಸಬಲ್ಲ ಈ ಪದ ನಿಗೂಢ ಅರ್ಥ ಗಂಭೀರವನ್ನೇ ತುಂಬಿಕೊಂಡಿದೆ.

ದೇವೇ೦ದ್ರನಾಗಿ ಶ್ರೀ ಜಯಾನ೦ದ ಸ೦ಪಾಜೆಯವರು
ಬಾಲ್ಯದಿಂದಲೇ ಆಧ್ಯಾತ್ಮದತ್ತ ಮುಖಮಾಡಿ ಲೌಕಿಕ ಜೀವನದ ಬಗ್ಗೆ ವಿರಕ್ತಳಾದ ಶಬರಿಯನ್ನು ಶ್ರೀರಾಮನ ಕಣ್ಣಲ್ಲಿ ಕವಿ ಹೀಗೆ ವೈವಿಧ್ಯಮಯವಾಗಿ ಕಾಣುತ್ತಾನೆ ಎಂದರೆ, ಅದರಲ್ಲೂ ಅದು ಯಕ್ಷಕವಿ ಎಂದಾಗುವಾಗ ಬಹಳಷ್ಟು ಚಿಂತನೆಗೆ ಗ್ರಾಸವಾಗುತ್ತದೆ. ಮಧುರತರಾಂಬುಜ ವದನೆ ಮದಗಜ ಸನ್ನಿಭಗಮನೇ ಇಲ್ಲಿ ಶೃಂಗಾರ ಕಾವ್ಯಕನ್ನಿಯ ವರ್ಣನೆ ಶಬರಿಯಾದರೆ, ನಂತರ ಆಜನ್ಮ ಪರ್ಯಂತ ಕನ್ಯೆಯಾಗಿ ವಿರಾಗಿಣಿಯಾದ ಶಬರಿಯನ್ನು ಪರಮ ಪತಿವೃತೆ ಎಂದು ಕೊಂಡಾಡುತ್ತಾನೆ.

ಶ್ರೀರಾಮ ಕಂಡ ವಿವಿಧ್ಯಮಯ ವ್ಯಕ್ತಿತ್ವದ ಶಬರಿಯ ಈ ಕಥಾನಕವೇ ಹೊಸನಗರ ಮೇಳದ “ಪಾದ ಪ್ರತೀಕ್ಷ” ಎಂಬ ಪ್ರಸಂಗ. ಒಂದಿಷ್ಟು ಅಬ್ಬರ, ಒಂದಿಷ್ಟು ಹಾಸ್ಯ ಶೃಂಗಾರ ಹೀಗೆ ಆರಂಭದಲ್ಲಿ ಕಂಡು ಬರುವ ಈ ಪ್ರಸಂಗ ಅಂತ್ಯದಲ್ಲಿ ಬಹಳ ಅರ್ಥಗರ್ಭಿತ ಮಂಗಳ ಹಾಡುತ್ತದೆ. ರಾಮಾಯಣ ಪ್ರಸಂಗಗಳಲ್ಲಿ ಶಬರೀ ಪ್ರಸಂಗ ಯಕ್ಷಗಾನದ ಬಯಲಾಟದಲ್ಲಿ ರಂಗವೇರುವುದು ಬಹಳ ಅಪರೂಪ.

ಜಟಾಯು ಮೋಕ್ಷದ ನಂತರೆ ಕೆಲವೇ ಕೆಲವು ಪದಗಳಲ್ಲಿ ಮುಗಿಯುವ ಶಬರೀ ಮೋಕ್ಷ ಪ್ರಸಂಗವನ್ನು ಪುನಃ ಸೃಷ್ಟಿಸಿ ರಂಗದ ಮೇಲೆ ತರುವಲ್ಲಿ ಬಹಳಷ್ಟು ಸಂಕಲನದ ಪ್ರಯೋಗವನ್ನು ಕಂಡಿದೆ. ಹಲವು ಪ್ರಸಂಗ ಸೇರಿಸಿ ಒಂದು ಬಯಲಾಟ ಮಾಡಿದಂತೆ ಇಲ್ಲಿ ಮೂಲತಹ ಪ್ರಸಂಗನ್ನು ಒಂದಾಗಿ ಮಾಡಲಾಗಿದೆ. ಯಕ್ಷಗಾನಕ್ಕೆ ಇದು ಹೊಸ ಪ್ರಯೋಗವೇನೂ ಅಲ್ಲ. ಏಕತಾನತೆಯ ಪ್ರವಾಹಕ್ಕೆ ಒಂದಿಷ್ಟು ತಿರುವು ಮರುವನ್ನು ಕಲ್ಪಿಸುವುದಷ್ಟೆ. ಹಾಗಾಗಿ ಇಲ್ಲಿ ಶಬರಿ ಮೋಕ್ಷದ ಜತೆಗೆ ಕಬಂಧ ಮೋಕ್ಷವೂ ಸೇರಿಕೊಂಡಿದೆ. ಮೂಲ ಪಾರ್ತಿ ಸುಬ್ಬನ ಪ್ರಸಂಗದಲ್ಲಿ ಒಂದೆರಡು ಪದಗಳ ಅಂತರದ ಪ್ರಸಂಗಗಳು ಇಲ್ಲಿ ಪೂರ್ಣ ರಾತ್ರಿಯ ಪ್ರಸಂಗಕ್ಕೆ ವಿಷಯವನ್ನು ಒದಗಿಸಿದೆ.

ಕಬ೦ಧನಾಗಿ ಶ್ರೀ ಸುಬ್ರಾಯ ಹೊಳ್ಳ, ಕಾಸರಗೋಡು
ಹಲವು ಪ್ರಸಂಗಗಳಂತೆ ಸಹಜವಾಗಿ ಇಲ್ಲಿ ದೇವೇಂದ್ರನ ಒಡ್ಡೋಲಗ, ಅಲ್ಲಿ ಅಪ್ಸರೆಯ ನಾಟ್ಯ. ಅಸಹಜ ನಾಟ್ಯದಿಂದ ಶಚೀದೇವಿಯ ಆಗ್ರಹಕ್ಕೆ ಒಳಗಾದ ಆಕೆಗೆ ಭೂಮಿಯಲ್ಲಿ ಜನಿಸುವಂತೆ ಶಪಿಸುತ್ತಾಳೆ. ಮುಂದೆ ಶ್ರೀರಾಮನ ಪಾದ ದರ್ಶನದಿಂದ ಶಾಪವಿಮೋಚನೆಯನ್ನೂ ಸೂಚಿಸುತ್ತಾಳೆ. ಇದು ಶಬರಿಯ ಜನ್ಮಕ್ಕೆ ಕಾರಣವಾದರೆ.

ಇದರಂತೇ ತನುವೆಂಬ ಗಂಧರ್ವ ಕನ್ಯೆಯೊಂದಿಗೆ ಜಲಕೇಳಿಯಾಡುವಾಗ ಸ್ಥೂಲ ಶಿರವೆಂಬ ಮುನಿಗೆ ಅವಮಾನ ಮಾಡಿ ಶಾಪಗ್ರಸ್ಥನಾಗಿ ಕಬಂಧನೆಂಬ ದಾನವನಾಗಿ ಹುಟ್ಟುತ್ತಾನೆ. ಕಬಂಧನು ಮದೋನ್ಮತ್ತನಾಗಿ ಸ್ವರ್ಗಲೋಕಕ್ಕೆ ಧಾಳಿ ಮಾಡಿದಾಗ ದೇವೆಂದ್ರನ ವಜ್ರಾಯುಧದ ಅಘಾತದಿಂದ ಶಿರಸ್ಸು ಉದರದೊಳಗೆ ತಳ್ಳಲ್ಪಡುತ್ತದೆ. ಇಲ್ಲಿಯೂ ರಾಮ ಪಾದ ದರ್ಶನದಿಂದ ಶಾಪವಿಮೋಚನೆಯನ್ನು ದೇವೇಂದ್ರ ಸೂಚಿಸುತ್ತಾನೆ. ಹೀಗೆ ಇಬ್ಬರು ಪತಿತರಾಗಿ ತಮ್ಮ ಶಾಪ ವಿಮೋಚನೆಗಾಗಿ ರಾಮನ ಪಾದ ದರ್ಶನದ ಪ್ರತೀಕ್ಷೆಯಲ್ಲಿರುವುದೇ ಪಾದ ಪ್ರತೀಕ್ಷವಾಗುತ್ತದೆ.

ಮೂಲ ಕಥೆಗೆ ಭಿನ್ನವಾಗಿ ಬಹಳಷ್ಟು ಬದಲಾವಣೆಗಳನ್ನು ಈ ಪ್ರಸಂಗದಲ್ಲಿ ಸೇರಿಸಲಾಗಿದೆ. ಮೂಲದಲ್ಲಿ ನನ್ನ ಅರಿವಿನಂತೆ, ನ್ಯಗ್ರೋಧನೆಂಬ ವ್ಯಾಧನಿಗೆ ಸಂತಾನವಾಗದೆ ಇದ್ದಾಗ ಮತಂಗಮುನಿಗಳು ಪ್ರಸಾದರೂಪವಾಗಿ ನೀಡಿದ ಚೂತ ಫಲದಲ್ಲಿ ನ್ಯಗ್ರೋಧನಿಗೆ ಆಕೆಯ ಪತ್ನಿಯಲ್ಲಿ ಸಂತಾನ ಪ್ರಾಪ್ತಿಯಾಗಿ ಶಬರಿ ಹುಟ್ಟಿಕೊಳ್ಳುತ್ತಾಳೆ. ಆದರೆ ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದು ಕೊಂಡ ಈಕೆ ಮತಂಗರ ಆಶ್ರಮದಲ್ಲೇ ಬೆಳೆಯುತ್ತಾಳೆ. ಆದರೆ ಇಲ್ಲಿ ವ್ಯಾಧನೊಬ್ಬನಿಗೆ ಹೆಣ್ಣು ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಆಕೆಗೆ ಶಬರಿ ಎಂದು ನಾಮಕರಣ ಮಾಡಲಾಗುತ್ತದೆ. ಬಲು ಮುಖ್ಯವಾದ ಚೂತ ಫಲ ಪ್ರಸಾದ ಉಲ್ಲೇಖ ಎಲ್ಲೂ ಕಂಡು ಬರುವುದಿಲ್ಲ. ಕಾಡಿನಲ್ಲಿ ಸಿಗುವ ಹೆಣ್ಣು ಮಗುವಿನ ಹಿನ್ನೆಲೆಯನ್ನು ಕತ್ತಲೆಯಲ್ಲಿಟ್ಟಂತೆ ಭಾಸವಾಗುತ್ತದೆ. ಬಹಳ ಮುಖ್ಯವಾದ ಅಂಶವೊಂದಕ್ಕೆ ಬೆಳಕು ಚೆಲ್ಲುವ ಅಗತ್ಯವಿತ್ತು. ಹೀಗೆ ಒಂದು ಹೆಣ್ಣು ಮಗು ಕಾಡಿನಲ್ಲಿ ಸಿಗುವುದು ಎಂದರೆ ಒಂದು ಅಸಹಜ ಕೊಂಡಿ ಕಳಚಿದಂತೆ.

ಯಕ್ಷಗಾನದ ಹಲವಾರು ಪ್ರಸಂಗಗಳು ಮೂಲ ಪುರಾಣ ಕಥೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿವೆ. ಅದರಂತೆ ಪಾದ ಪ್ರತೀಕ್ಷ. ಯಕ್ಷಗಾನ ಬಯಲಾಟಕ್ಕೆ ಸೂಕ್ತವಾಗುವಂತೆ ಹಲವು ದೃಶ್ಯಗಳನ್ನು ಸಂಯೋಜಿಸಲಾಗಿದೆ. ಹಲವು ಕಲಾವಿದರಿಗೆ ಹೊಂದಿಕೊಂಡು ಈ ದೃಶ್ಯಗಳೂ ಪಾತ್ರಗಳು ಸಂಯೋಜನೆಗೊಂಡದ್ದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಒಟ್ಟು ಯಶಸ್ಸನ್ನು ಪರಿಗಣಿಸುವಾಗ ಅದು ತಪ್ಪೂ ಅಲ್ಲ. ಆದರೆ ಹಲವಾರು ಸನ್ನಿವೇಶಗಳು ಒಂದರೊಡನೊಂದು ಸಮನ್ವಯಸಾಧಿಸುವಲ್ಲಿ ವಿಫಲವಾಗುವುದರಿಂದ ಹಲವಾರು ಸಲ ಪ್ರೇಕ್ಷಕ ಗೊಂದಲದಲ್ಲಿ ಬೀಳುತ್ತಾನೆ.

ಮಹಿಷನಾಗಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರವರು
ಹಲವಾರು ಸನ್ನಿವೇಶಗಳು ಒಂದೊಂದು ಆವರಣವನ್ನು ಅಲ್ಪವಿರಾಮ (ಕೋಮ) ವನ್ನು ಎಳೆದು ಮತ್ತೊಂದು ಸನ್ನಿವೇಶಕ್ಕೆ ಪ್ರಸಂಗ ಮುಂದುವರೆಯುತ್ತದೆ. ಅಂದರೆ ಅದೆಷ್ಟೇ ಪೌರಾಣಿಕ ಮಾಹಿತಿ ಇದ್ದರೂ ಎಲ್ಲಿಂದಲೋ ಸೃಷ್ಟಿಯಾಗುವ ಪಾತ್ರಗಳ ಹಿನ್ನೆಲೆಯನ್ನು ಅರಿಯುವ ಮೊದಲೇ ಆ ಪಾತ್ರದ ಸನ್ನಿವೇಶ ಅಷ್ತರಲ್ಲೇ ಪೂರ್ಣಗೊಂಡಿರುತ್ತದೆ. ಬಹುಶಃ ಕಾಲ ಮಿತಿಗೆ ಇದನ್ನು ಹೊಂದಿಸುವಲ್ಲಿ ಇದು ಸಂಭವಿಸ್ತುತ್ತದೆ ಎಂದು ಭಾವಿಸಬೇಕು. ಹಲವು ಕಲಾವಿದರಿಗೋಸ್ಕರ ದೃಶ್ಯಗಳನ್ನು ಸಂಯೋಜಿಸಿದ್ದರೂ ಯಾವುದೇ ಪಾತ್ರ ಯಾವುದೇ ಕಲಾವಿದನಿಗೆ ಮಾತ್ರ ಎಂದು ಮುಡಿಪಾಗುವುದಿಲ್ಲ. ಒಂದು ಪಾತ್ರವನ್ನು ಪರ್ಯಾಯವಾಗಿ ಹಲವು ಕಲಾವಿದರೂ ನಿರ್ವಹಿಸುವಂತೆ ಪ್ರಸಂಗ ಸೃಷ್ಟಿಯಾಗಿರುವುದು ವೈಶಿಷ್ಟ್ಯ ಎನ್ನಬೇಕು. ಆದರೂ ಕಬಂಧನ ಪಾತ್ರ ಮತ್ತು ವೃದ್ದೆ ಶಬರಿಯ ಪಾತ್ರ ಈ ಪ್ರಸ್ತುತ ಕಲಾವಿದರಲ್ಲದೇ ಬೇರೆಯವರು ನಿರ್ವಹಿಸುವುದನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಅಷ್ಟು ಅದ್ಭುತವಾಗಿ ಈ ಪಾತ್ರ ಸೃಷ್ಟಿಯಾಗಿದೆ ಎನ್ನಬಹುದು.

ಇಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬ ಕಲಾವಿದರೂ ತಮ್ಮ ಸಾಮಾರ್ಥ್ಯಕ್ಕೆ ಅನುಗುಣವಾಗಿ ನಿರ್ವಹಿಸುತ್ತಾರೆ. ಪಾತ್ರಕ್ಕೆ ಪರಿಪೂರ್ಣತೆಯನ್ನು ಒದಗಿಸುವ ಪ್ರಯತ್ನ ಪ್ರತಿಯೊಬ್ಬರಲ್ಲಿ ಕಂಡರೂ ಇಲ್ಲಿ ಒಟ್ಟು ತಂಡವಾಗಿ ನಿರ್ವಹಣೆ ಅಂದರೆ ಟೀಮ್ ಸ್ಪಿರಿಟ್ ಎನ್ನುವುದು ಕಂಡು ಬರುವುದಿಲ್ಲ. ಇದನ್ನು ಒಂದು ದಿನದ ನಿರ್ವಹಣೆಯಲ್ಲಿ ಹೇಳೂವುದು ಕಷ್ಟವಾದರೂ ಪ್ರಸ್ತುತ ಪ್ರದರ್ಶನದಲ್ಲಿ ಇದರ ಕೊರತೆ ಬಹಳಷ್ಟು ಸಲ ಕಂಡುಬಂದು ಯಾಂತ್ರಿಕವಾದ ಪ್ರಸಂಗದಂತೆ ಭಾಸವಾಯಿತು. ಅನಗತ್ಯ ಹಾಸ್ಯ ಲಂಬಿಸುವುದು, ಹಾಸ್ಯ ಬಹಳಷ್ಟು ಸಲ ಲೌಕಿಕ ವಿಚಾರಗಳನ್ನೇ ಆಧರಿಸುವುದು ಯಕ್ಷಗಾನವನ್ನು ನಾಟಕದ ಹಂತಕ್ಕೆ ತಲುಪಿಸುತ್ತದೆ. ಕೆಲವೊಂದೆಡೆ ಬಿಟ್ಟರೆ ಹಾಸ್ಯವು ಪ್ರಸಂಗ ಗಾಂಭೀರ್ಯವನ್ನು ಪರಿಗಣಿಸಿದಲ್ಲಿ ಅದು ಅತಿರೇಕ ಅಂತ ಅನ್ನಿಸುತ್ತದೆ. ಯಾಕೆಂದರೆ ಉಜ್ವಲವಾದ ಅಧ್ಯಾತ್ಮ ಜೀವನದ ದರ್ಶನದಂತಿರುವ ಈ ಪ್ರಸಂಗದಲ್ಲಿ ಅನಗತ್ಯ ಹಾಸ್ಯದ ಸೃಷ್ಟಿ ಒಟ್ಟು ಪರಿಣಾಮವನ್ನು ಉಂಟುಮಾಡುವಲ್ಲಿ ತೊಂದರೆಯನ್ನು ಕೊಡುತ್ತದೆ. ಅಪರೂಪದ ಪ್ರಸಂಗ ರಂಗದ ಮೇಲೆ ತಂದ ಕಾರ್ಯ ಶ್ಲಾಘನೀಯ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ನಿಟ್ಟಿನಲ್ಲಿ ಸಾಗಬೇಕು.



ಕೃಪೆ : http://yakshachintana.blogspot.in

ಛಾಯಾ ಚಿತ್ರ ಕೃಪೆ : ಶ್ರೀ ಉಲ್ಲಾಸ್


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ